ಹೆಗೆಲ್, ಜೆ ಡಬ್ಲ್ಯು ಎಫ್ 
	1770-1831. ಪ್ರಪಂಚ ಖ್ಯಾತನಾದ ಶ್ರೇಷ್ಠ ಜರ್ಮನ್ ತತ್ತ್ವಜ್ಞಾನಿ. ಜರ್ಮನಿಯ ಸ್ಟರ್ಟ್‍ಗರ್ಟ್‍ನಲ್ಲಿ 1770 ಆಗಸ್ಟ್ 27ರಂದು ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ. ತಂದೆ ಕಂದಾಯಖಾತೆಯ ಅಧಿಕಾರಿ. ಶಾಲೆ ಸೇರುವ ಮೊದಲೇ ಇವನು ತನ್ನ ತಾಯಿಯಿಂದ ಲ್ಯಾಟಿನ್ ಭಾಷೆಯನ್ನು ಕಲಿತ. ಬಾಲ್ಯದ ವಿದ್ಯಾಭ್ಯಾಸವನ್ನು ಸ್ಟರ್ಟ್‍ಗರ್ಟ್‍ನಲ್ಲಿಯೂ ಕಾಲೇಜು ವ್ಯಾಸಂಗವನ್ನು ಟ್ಯೂಬಿನ್ ಜೆನ್ ವಿಶ್ವವಿದ್ಯಾಲಯದಲ್ಲಿಯೂ ಮುಗಿಸಿ ಪಿಎಚ್.ಡಿ. ಪದವಿ ಗಳಿಸಿದ. ಆರಂಭದಲ್ಲಿ ತತ್ತ್ವಜ್ಞ ಹಾಗೂ ಆಪ್ತಮಿತ್ರನಾಗಿದ್ದ ಶೆಲ್ಲಿಂಗ್‍ನಿಂದ ಪ್ರಭಾವಿತನಾದರೂ ತನ್ನದೇ ಆದ ಹಲವಾರು ಸ್ವತಂತ್ರ ನಿಲುವುಗಳನ್ನು ಮಂಡಿಸುವ ಪ್ರಯತ್ನವಾಗಿ ಫೆನಾಮಿನಾಲಜಿ ಆ¥sóï ಸ್ಪಿರಿಟ್ (1807) ಗ್ರಂಥವನ್ನು ರಚಿಸಿದ.  ಇದು ಇವನ ಶ್ರೇಷ್ಠಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈತ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಸೇವೆಸಲ್ಲಿಸಿದ. ಎನ್‍ಸೈಕ್‍ಲೊಪೀಡಿಯ ಆ¥sóï ಫಿûಲಸಾಫಿûಕ್ ಸೈನ್ಸಸ್ (1821) ಎಂಬ ಕೃತಿಯ ಮೂಲಕ ಈತನ ತತ್ತ್ವಶಾಸ್ತ್ರದ ಚಿಂತನೆಗಳು ಪ್ರಸಿದ್ಧಗೊಂಡವು. ಇದರಲ್ಲಿ ಫಿûಲಾಸಫಿû ಆಫ್ ನೇಚರ್, ಫಿûಲಾಸಫಿû ಆ¥sóï ಸ್ಪಿರಿಟ್, ಫಿûಲಾಸಫಿû ಆ¥sóï ರೈಟ್ ಎಂಬ ಮೂರು ವಿಭಾಗಗಳಿವೆ. ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ, ನೈತಿಕ ಹಾಗೂ ನ್ಯಾಯ ವಿಚಾರಗಳ ವಿಶ್ಲೇಷಣೆಗಳಿವೆ. ಕ್ರಮೇಣ ಇವನ ಸಿದ್ಧಾಂತಗಳಿಂದ ಹೆಗೆಲ್ ಪಂಥ ಎಂಬ ಒಂದು ಪ್ರತ್ಯೇಕ ತತ್ತ್ವಪಂಥವೇ ಬೆಳೆಯಲಾರಂಭಿಸಿತು. ಕಲೆ, ಕಾವ್ಯ, ಧರ್ಮ ಹೀಗೆ ಹಲವಾರು ವಿಷಯಗಳಲ್ಲಿ ಪರಿಣತನಾಗಿದ್ದ ಈತ ಜಗತ್ತನ್ನು ಅದರ ನೈಜರೂಪದಲ್ಲಿ ಅರಿತುಕೊಳ್ಳಲು ಪ್ರಯತ್ನಿಸಿ ಎಲ್ಲವನ್ನೂ ತರ್ಕಬದ್ಧವಾಗಿ ಪ್ರತಿಪಾದಿಸಲು ತೊಡಗಿದ. ವಿರೋಧಾಭಾಸಗಳಲ್ಲಿ ಅತಿಯಾದ ಆಸಕ್ತಿ ತಳೆದ. 

	ಇವನ ಆತ್ಮವಿಶ್ವಾಸವೂ ಅತಿಯಾದದ್ದು. ತನ್ನ ಬುದ್ಧಿ ಕಂಡುಹಿಡಿಯಲಾಗದ ಯಾವ ಗೌಪ್ಯತೆಗಳನ್ನೂ ದೇವರು ಸೃಷ್ಟಿಸಿಲ್ಲ ಎಂಬ ನಂಬಿಕೆ ಇವನದಾಗಿತ್ತು. ವೈಯಕ್ತಿಕ ಭಾವನೆಗಳನ್ನು, ಕಲುಷಿತ ದೃಷ್ಟಿಕೋನಗಳನ್ನು ಬದಿಗೊತ್ತಿ, ನಿರ್ವಿಕಾರ ಭಾವನೆಯಿಂದ ವಸ್ತುವಿನ ಸತ್ಯತೆಯನ್ನು ಜನರ ಮುಂದಿಡುವುದರ ಮೂಲಕ ಅಪಾರ ಗೌರವಕ್ಕೂ ಪಾತ್ರನಾಗಿದ್ದ ಜಗತ್ತನ್ನು ಅರ್ಥಪೂರ್ಣವಾದ ಸಾವಯವ ಅಥವಾ ಅವಯವಿ (ಹೋಲ್) ಎಂದು ಕಲ್ಪಿಸಿ ಅದರ ವ್ಯಾಪಾರವನ್ನು ತರ್ಕಬದ್ಧವಾಗಿ ವಿವರಿಸುವ ಈತನ ಗಂಭೀರ ಪ್ರಯತ್ನ ಮಹತ್ತ್ವದ ಸಾಹಸವಾಗಿದೆ. ಹೀಗೆ ವಿವರಿಸುವಾಗ ಜಗತ್ತಿನ ಆಕಸ್ಮಿಕತೆಯನ್ನು (ಕಂಟಿಂನ್‍ಜೆನ್ಸಿ) ವಿವೇಚನಾ ಬುದ್ಧಿಗೆ ವಿರುದ್ಧವಾದುವೆಲ್ಲವನ್ನು ತೆಗೆದುಹಾಕಿ ಬದಲಾವಣೆಯ ಮಧ್ಯದಲ್ಲಿ ಸಿಲುಕಿ ಸ್ಥೈರ್ಯಕ್ಕಾಗಿ ಅತಿಯಾಗಿ ಹಂಬಲಿಸುವ ಮಾನವನ ಇಚ್ಛೆಯನ್ನು ಪೂರೈಸುವ ಇವನ ತತ್ತ್ವಶಾಸ್ತ್ರ ಪ್ರಾಯೋಗಿಕ ಮೌಲ್ಯ ಗಳಿಸಿದೆ. ಈತನ ಈ ಬಗೆಯ ಹೊಸದೃಷ್ಟಿಯ ತಾತ್ವಿಕ ನಿರೂಪಣೆ ಮಾನವನ ಹಾಗೂ ಜಗತ್ತಿನ ಇತಿಹಾಸಕ್ಕೆ ಮಹತ್ತ್ವದ ಕೊಡುಗೆಯಾಗಿದೆ. 

	ಈತನ ಪ್ರಕಾರ ವಿಶ್ವಕ್ಕೆ ಅರ್ಥವಿದೆ, ನಿಸರ್ಗದ ವ್ಯಾಪಾರಗಳು ನಿಯಮಬದ್ಧವಾಗಿವೆ, ನಿಸರ್ಗದ ಪ್ರತಿವಸ್ತುವಿಗೂ ಇತರ ವಸ್ತುಗಳೊಡನೆ ಸಂಬಂಧವಿದೆ. ಈ ಚಟುವಟಿಕೆಗಳ ಅರ್ಥವನ್ನು ಕಂಡುಹಿಡಿಯಲು ಸಾಧ್ಯವಿದೆ; ಸತ್ ಎಂಬುದು ವಿವೇಚನಾ ಬುದ್ಧಿಗೆ ನಿಲುಕದ ವಸ್ತು ಎಂಬ ಅಭಿಪ್ರಾಯವನ್ನು ತಳ್ಳಿ ಹಾಕಿ ಅದು ಜ್ಞಾನಕ್ಕೆ ನಿಲುಕುವಂತಹದ್ದು ಎಂದು ಪ್ರತಿಪಾದಿಸಿದ. ವಸ್ತುಗಳನ್ನು, ಸಂಗತಿಗಳನ್ನು ವಿವರಿಸುವುದೆಂದರೆ ಅವುಗಳ ಕಾರ್ಯಕಾರಣ ಸಂಬಂಧಗಳನ್ನು ವಿವರಿಸುವುದಲ್ಲ; ಒಂದು ಸಂಗತಿ ಮತ್ತೊಂದನ್ನು ಹೇಗೆ ಅಗತ್ಯವಾಗಿ ಹಿಂಬಾಲಿಸುತ್ತದೆ ಎಂಬುದನ್ನು ವಿವರಿಸಬೇಕು. ಹಾಗಾದಾಗ ಮಾತ್ರ ಸಂಗತಿಗಳು ಅರ್ಥಪೂರ್ಣ ಎಂಬುದು ಈತನ ಅಭಿಪ್ರಾಯ. ಇವನು ತತ್ತ್ವಶಾಸ್ತ್ರದಲ್ಲಿ ವಿವೇಚನೆಗೆ (ರೀಸನ್) ಹೆಚ್ಚು ಮಹತ್ವ ನೀಡಿದ್ದಾನೆ. ಸತ್ ಹಾಗೂ ವಿವೇಚನೆ ಎರಡೂ ಒಂದೇ; ನಿಸರ್ಗವು ವಿವೇಚನಾ ಬುದ್ಧಿಯ ಮೂರ್ತರೂಪ. ವಿವೇಚನೆ ಎಂಬುದು ವಸ್ತುನಿಷ್ಠವಾದದ್ದು. ಇವನ ಭಾವನಾವಾದವನ್ನು ತಾರ್ಕಿಕ ಭಾವನಾವಾದ (ಲಾಜಿಕಲ್ ಐಡಿಯಲಿಸಮ್) ಎಂದು ವಿವರಿಸಲಾಗಿದೆ. ಇವನ ಪ್ರಕಾರ ಅಂತಿಮ ಸತ್ಯ ಎಂಬುದು ಪರಿಪೂರ್ಣವಾದದ್ದು. ಅದು ಚಿನ್ಮಯವಾಗಿದೆ. ಅದು ವಿವಿಧ ಅವಸ್ಥೆಗಳನ್ನನುಭವಿಸಿ ವೃದ್ಧಿಹೊಂದಿ, ಜಗತ್ತಾಗಿ ಪುನಃ ತನ್ನ ಮೊದಲಿನ ಸ್ಥಿತಿಗೆ ಹಿಂತಿರುಗುತ್ತದೆ. ಪರಮಸತ್ಯ ಚಲನಾತ್ಮಕವೂ ಕ್ರಿಯಾತ್ಮಕವೂ ಆದದ್ದು. 

	ಇವನ ತತ್ತ್ವಶಾಸ್ತ್ರದ ವಿವಿಧ ಮುಖಗಳ ಗ್ರಹಿಕೆಗೆ ಇವನು ವಿವರಿಸುವ ಮೂಲಭೂತ ಭಾವನೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಸಾವಯ ಅಥವಾ ಅವಯವಿ (ಹೋಲ್) ಮತ್ತು ಅವಯವ (ಪಾಟ್ರ್ಸ್); ಸತ್ ಹಾಗೂ ಅರಿವು; ಪರತತ್ತ್ವ ಹಾಗೂ ಪರಮಭಾವ (ಆ್ಯಬ್ಸಲ್ಯೂಟ್ ಐಡಿಯ); ಪ್ರಮೇಯಾಂಶ (ಥೀಸಿಸ್) ಹಾಗೂ ವಿರುದ್ಧಾಂಶ (ಆ್ಯನ್ಟಿಥೀಸಿಸ್); ತರ್ಕ (ಲಾಜಿಕ್) ಹಾಗೂ ನಿಸರ್ಗ (ನೇಚರ್) ಮೊದಲಾದವು. ತತ್ತ್ವಶಾಸ್ತ್ರದ ಈ ಪರಿಭಾಷೆಗಳ ಕಲ್ಪನೆಯನ್ನು ಕಲೆಯ ಅರ್ಥಗ್ರಹಿಕೆಗೂ ಈತ ವಿಸ್ತರಿಸಿದ್ದಾನೆ. 

	ಇವನ ಅಭಿಪ್ರಾಯದಲ್ಲಿ ಕಲೆಗಳಲ್ಲಿ ಮೂರು ಪ್ರಕಾರಗಳಿವೆ : ಸಾಂಕೇತಿಕ ಕಲೆ, ರಮ್ಯ ಕಲೆ ಮತ್ತು ಮಾರ್ಗಕಲೆ. ಸೌಂದರ್ಯಮೀಮಾಂಸಕರಲ್ಲಿ ಕೂಡ ಈತ ಮುಖ್ಯನಾದವನು. ಪರತತ್ತ್ವವನ್ನು ಇಂದ್ರಿಯವಸ್ತು ಎಂದು ಮನಸ್ಸು ಗ್ರಹಿಸಿದಾಗ ಕಲೆಯ ಉದ್ಭವವಾಗುತ್ತದೆ. ಅದನ್ನು ಶುದ್ಧವಿವೇಚನಾ ಬುದ್ಧಿ ಎಂದು ಮನಸ್ಸು ಗ್ರಹಿಸಿದಾಗ ತತ್ತ್ವಜ್ಞಾನದ ಉದಯವಾಗುತ್ತದೆ. ಆದರೆ ಮನಸ್ಸು ಕಲೆಯ ಅವಸ್ಥೆಯಿಂದ ತತ್ತ್ವಜ್ಞಾನದ ಅವಸ್ಥೆಯನ್ನು ಒಮ್ಮೆಲೇ ಮುಟ್ಟಲಾರದು. ಈ ಎರಡು ಅವಸ್ಥೆಗಳ ಮಧ್ಯೆ ಇರುವ ಅವಸ್ಥೆಯೇ ಮತಧರ್ಮ. ಈ ರೀತಿ ಇವನ ತತ್ತ್ವಗಳು ಒಂದಕ್ಕೊಂದು ಸಂಬಂಧವನ್ನು ಕಲ್ಪಿಸಿಕೊಂಡು ಸಾಗುತ್ತವೆ. ಈತ 1831 ನವೆಂಬರ್ 14ರಂದು ನಿಧನನಾದ.			
				
		(ಎಲ್.ವಿ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ